ಮಾಂಧಾತ		
ಒಬ್ಬ ಅರಸ. ಸೂರ್ಯವಂಶದ ಯುವನಾಶ್ವನ ಮಗ. ಯುವನಾಶ್ವನಿಗೆ ನೂರಾರು ಮಡದಿಯರಿದ್ದರೂ ಸಂತಾನಪ್ರಾಪ್ತಿಯಾಗಲಿಲ್ಲ. ಈ ಕೊರಗನ್ನು ನಿವಾರಿಸಲು ಭೃಗುಮುನಿ ಈತನಿಂದ ಪುತ್ರಕಾಮೇಷ್ಟಿಯಾಗ ಮಾಡಿಸಿದ. ಒಂದು ರಾತ್ರಿ ಭೃಗು ಕಲಶವೊಂದರಲ್ಲಿ ಪುತ್ರಪ್ರದ ಮಂತ್ರಗಳಿಂದ ಅಭಿಮಂತ್ರಿತವಾದ ಉದಕವನ್ನು ಯಜ್ಞವೇದಿಕೆಯ ಮೇಲಿಟ್ಟಿದ್ದ. ಪ್ರಮಾದವಶಾತ್ ಯುವನಾಶ್ವ ಅದನ್ನು ಕುಡಿದು ತಾನೇ ಗರ್ಭಧರಿಸಿದ. ಗರ್ಭ ಬೆಳೆದು ಹೊಟ್ಟೆಯ ಬಲಭಾಗವನ್ನು ಭೇದಿಸಿಕೊಂಡು ಮಗು ಹೊರಬಂದಿತು. ಶಿಶುವಿಗೆ ಸ್ತನ್ಯಪಾನದ ಸಮಸ್ಯೆ ಎದುರಾದಾಗ ಇಂದ್ರ ಬಲಗೈ ಹೆಬ್ಬೆಟ್ಟಿನಲ್ಲಿ ಅಮೃತ ರಸತುಂಬಿಕೊಂಡು ಅಲ್ಲಿಗೆ ಬಂದು ಮಾಂ ಧಾಸ್ಯತಿ (ನನ್ನನ್ನೂ ಚೀಪುತ್ತಾನೆ) ಎಂದು ಹೇಳಿ ಸ್ತನ್ಯಪಾನ ಮಾಡಿಸಿದ್ದರಿಂದ ಆ ಮಗುವಿಗೆ ಮಾಂಧಾತ ಎಂಬ ಹೆಸರಾಯಿತು. ಮಾಂಧಾತ ಯದುವಂಶದ ಶತಬಿಂದು ರಾಜನ ಮಗಳಾದ ಬಿಂದುಮತಿಯನ್ನು ಮದುವೆಯಾಗಿ ಪುರುಕುತ್ಸ, ಅಂಬರೀಷ, ಮುಚಕ್ಕುಂದರೆಂಬ ಮೂವರು ಪುತ್ರರನ್ನು ಪಡೆದ. ಐವತ್ತು ಹೆಣ್ಣು ಮಕ್ಕಳನ್ನು ಪಡೆದು ಅವರನ್ನು ಸೌಭರಿ ಮಹರ್ಷಿಗೆ ಕೊಟ್ಟು ಮದುವೆಮಾಡಿದ. ಮಾಂಧಾತ ಮಹಾಪರಾಕ್ರಮಶಾಲಿ. ಧರ್ಮಾತ್ಮ, ಧೈರ್ಯವಂತ, ಸತ್ಯಸಂಧ, ಜಿತೇಂದ್ರಿಯ. ನೂರು ರಾಜಸೂಯ. ನೂರು ಅಶ್ವಮೇಧ ಯಾಗಗಳನ್ನು ಮಾಡಿ ಸಾರ್ವಭೌಮ ಎನಿಸಿಕೊಂಡ. ಒಂದು ಯೋಜನದಷ್ಟು ಎತ್ತರ, ನೂರು ಯೋಜನೆಗಳ ಉದ್ದದ ಸುವರ್ಣಮಯವಾದ ಚಮ್ಮೀನ್ನು ಬ್ರಾಹ್ಮಣರಿಗೆ ದಾನಮಾಡಿದ್ದ. ಈ ವಿಜಯದ ಮತ್ತಿನಿಂದ ದುರ್ಬುದ್ಧಿ ಹುಟ್ಟಿ ಸ್ವರ್ಗವನ್ನೇ ಜಯಿಸಬೇಕೆಂದು ದೇವೇಂದ್ರನ ಮೇಲೆ ದಂಡೆತ್ತಿ ಹೋದ. ಆಗ ಇಂದ್ರ `ನನ್ನನ್ನು ಸೋಲಿಸುವುದಕ್ಕೆ ಮೊದಲು ಭೂಲೋಕದಲ್ಲಿರುವ ಲವಣಾಸುರರನ್ನು ಗೆದ್ದು ಬಾ ಎಂದು ಛೇಡಿಸಿದ. ಮಾಂಧಾತ ಲವಣಾಸುರನೊಂದಿಗೆ ಕದನಕ್ಕೆ ಹೋಗಿ, ಲವಣಾಸುರ ಶಿವನಕೃಪೆಯಿಂದ ಪಡೆದಿದ್ದ ಶೂಲದಿಂದ ಹತನಾದ ಈ ವೃತ್ತಾಂತ ಭಾರತ, ಭಾಗವತ, ರಾಮಾಯಣಗಳಲ್ಲಿ ಬಂದಿದೆ. 				 	 
(ಆರ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ